“ಗಾನ ಸಾರಥಿ” ಶ್ರೀ ಜನ್ಸಾಲೆ ರಾಘವೇಂದ್ರ ಆಚಾರ್ಯರ ಚರಿತ್ರೆ”

ಶ್ರೀಯುತ ರಾಘವೇಂದ್ರ ಆಚಾರ್ಯರು, 14 ಅಕ್ಟೋಬರ್ 1983ರಂದು ಶ್ರೀಮತಿ ಜಾನಕಿ ಮತ್ತು ಶ್ರೀ ಲಕ್ಷ್ಮಣ ಆಚಾರ್ಯ ದಂಪತಿಗಳ ಪುತ್ರನಾಗಿ ಜನಿಸಿದವರು.
ಬಾಲ್ಯದಲ್ಲಿಯೇ ಭಾಗವತ ಕಾಳಿಂಗ ನಾವಡರ ಪದ್ಯಗಳ ಮಾಧುರ್ಯತೆಗೆ ಮಾರುಹೋಗಿ ಯಕ್ಷಗಾನದತ್ತ ತಮ್ಮ ಮನಸ್ಸು ಹರಿಸಿದರು.
ಜನ್ಸಾಲೆ ಎಂಬ ಗ್ರಾಮೀಣ ನಾಡಿನಲ್ಲಿ ಬೆಳೆದು ಬಂದ ಇವರು, 9ನೇ ತರಗತಿಯ ನಂತರ ಶಾಲಾ ಶಿಕ್ಷಣವನ್ನು ತ್ಯಜಿಸಿ, ಸಂಪೂರ್ಣವಾಗಿ ಯಕ್ಷಗಾನ ಕಲೆಗೆ ಅರ್ಪಿಸಿಕೊಂಡರು.
ರಾಘವೇಂದ್ರ ಆಚಾರ್ಯರು ಯಕ್ಷಗಾನದ ಪ್ರಾಥಮಿಕ ಕಲಿಕೆಯನ್ನು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಪಡೆದರು. ಇಲ್ಲಿ ಅವರು ಗುರು ಬನ್ನಂಜೆ ಸಂಜೀವ ಸುವರ್ಣರಿಂದ ನಾಟ್ಯಾಭ್ಯಾಸ, ಗುರು ಗೋರ್ಪಾಡಿ ವಿಠಲ ಪಾಟೀಲರಿಂದ ತಾಳಗತಿ ಹಾಗೂ ಗಾಯನದ ತರಬೇತಿ, ಮತ್ತು ಹಾರ್ಯಾಡಿ ಸತೀಶ್ ಕೆದ್ಲಾಯರಿಂದ ಸಭಾಲಕ್ಷಣ ಮತ್ತು ಪೂರ್ವರಂಗ ಕಲಿತರು. ಈ ಸಂಯುಕ್ತ ಶಿಕ್ಷಣದ ಮೂಲಕ ಅವರು ಯಕ್ಷಗಾನ ಕಲೆಯ ವಿವಿಧ ಅಂಗಗಳಲ್ಲಿ ಗಾಢ ಪರಿಶೀಲನೆ ಹೊಂದಿದರು. ನಂತರ, ಹವ್ಯಾಸಿ ಭಾಗವತರಾಗಿ ಎರಡು ವರ್ಷ ಸೇವೆ ಸಲ್ಲಿಸಿದ ಅವರು, ಮಾರಣಕಟ್ಟೆ ಮೇಳದಲ್ಲಿ ತಮ್ಮ ವೃತ್ತಿ ಸೇವೆ ಪ್ರಾರಂಭಿಸಿದರು. ಇಲ್ಲಿ ಅವರು ಮೊದಲ ಎರಡು ವರ್ಷ ಸಂಗೀತಗಾರರಾಗಿ, ನಂತರ ಐದು ವರ್ಷ ಸಹಭಾಗವತರಾಗಿ, ಹಾಗೂ ಮುಂದಿನ ಐದು ವರ್ಷ ಪ್ರಧಾನ ಭಾಗವತರಾಗಿ ತಿರುಗಾಟ ಮಾಡುತ್ತಾ, ತಮ್ಮ ಕಲೆ ಮತ್ತು ಶ್ರದ್ಧೆಯಿಂದ ಪ್ರೇಕ್ಷಕ ಹೃದಯ ಗೆದ್ದರು.

ರಾಘವೇಂದ್ರ ಆಚಾರ್ಯರು ತಮ್ಮ ವೃತ್ತಿ ತಿರುಗಾಟವನ್ನು ನಂತರ ಪೆರ್ಡೂರು ಮೇಳದಲ್ಲಿ ಆರಂಭಿಸಿ ಅಪಾರ ಜನಮೆಚ್ಚುಗೆ ಗಳಿಸಿದರು. ಈ ನಡುವಿನ ಕಾಲಘಟ್ಟದಲ್ಲಿ ಅವರು ಒಂದು ವರ್ಷ ಅತಿಥಿ ಭಾಗವತರಾಗಿ ಯಕ್ಷಗಾನ ತಿರುಗಾಟ ನಡೆಸಿದ ಬಳಿಕ, ಇದೀಗ ಮತ್ತೆ ಪೆರ್ಡೂರು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದು, ಯಕ್ಷಗಾನ ರಂಗದಲ್ಲಿ ೨೫ನೇ ವರ್ಷದ ತಿರುಗಾಟವನ್ನು ನಡೆಸುತ್ತಿದ್ದಾರೆ. ಪೌರಾಣಿಕ ಪ್ರಸಂಗಗಳಲ್ಲಿ ಅವರ ಕಂಠಸಿರಿ ಹಾಗೂ ಭಾವನಾತ್ಮಕ ಶೈಲಿಯಲ್ಲಿ ಹಾಡುವ ವೈಖರಿ ರಂಗಸೃಷ್ಟಿಗೆ ಹೊಸ ಮಿತಿಗಳನ್ನು ನೀಡುತ್ತಿದ್ದು, ಹಂತ ಹಂತವಾಗಿ ಕಲೆಯಲ್ಲಿ ಸಿದ್ಧಿ ಸಂಪಾದಿಸಿ, ಸತತ ಪರಿಶ್ರಮದಿಂದ ಬಡಗುತಿಟ್ಟಿನ ಪ್ರಮುಖ ಭಾಗವತರಾಗಿ ಗುರುತಿಸಿಕೊಂಡಿದ್ದಾರೆ.
ಬಡಗಿನ ಖ್ಯಾತ ಸ್ತ್ರೀವೇಷಧಾರಿ ಅರಾಟೆ ಮಂಜುನಾಥರ “ಅರಾಟೆ ಪ್ರವಾಸಿ ಯಕ್ಷಗಾನ” ತಂಡದೊಂದಿಗೆ ತಿರುಗಾಟ ನಡೆಸಿದ ಅವರು, ತಮ್ಮ ಕಂಠಸಿರಿಯಿಂದ ವಿವಿಧೆಡೆ ಅಪಾರ ಕೀರ್ತಿ ಗಳಿಸಿದ್ದಾರೆ. ಸದಾ ಕಲಿಯುವ ತುಡಿತ ಹೊಂದಿರುವ ಇವರು, ಯಕ್ಷರಂಗದ ಶಿಸ್ತು, ಸಂಪ್ರದಾಯ, ಪ್ರಸಂಗಗಳ ಅಧ್ಯಯನ, ಪುರಾಣ ಜ್ಞಾನ, ಹಾಗೂ ಹಿರಿಯ ಕಲಾವಿದರೊಂದಿಗೆ ಪ್ರಸಂಗ ಪೂರ್ವ ಸಿದ್ಧತೆಯ ಬದ್ಧತೆ ಎಂಬ ಅಂಶಗಳನ್ನು ತಮ್ಮಲ್ಲಿ ಸಂಪೂರ್ಣವಾಗಿ ಬೆಳೆಸಿಕೊಂಡಿದ್ದಾರೆ.
ಅವರ ನೆಚ್ಚಿನ ರಾಗಗಳು: ನಾಟಿ, ಕಲ್ಯಾಣಿ, ಅಭೇರಿ, ಮೋಹನ, ಕಲಾವತಿ, ಷಣ್ಮುಖಪ್ರಿಯ, ಹಿಂದೋಳ.
ನೆಚ್ಚಿನ ಪ್ರಸಂಗಗಳು: ರಾಮಾಯಣ, ಮಹಾಭಾರತ.
ಅವರ ಮೆಚ್ಚಿನ ಭಾಗವತರು: ದಿ. ಕಾಳಿಂಗ ನಾವಡ, ದಿ. ಮರಿಯಪ್ಪ ಆಚಾರ್ಯ, ಗೋಪಾಲ್ ಗಾಣಿಗ, ರಾಘವೇಂದ್ರ ಮಯ್ಯ, ವಿದ್ವಾನ್ ಗಣಪತಿ ಭಟ್.
ಚೆಂಡೆ ವಾದಕರು: ರಾಮಕೃಷ್ಣ ಮಂದಾರ್ತಿ, ರಾಕೇಶ್ ಮಲ್ಯ, ಕೋಟ ಶಿವಾನಂದ, ಸುಜನ್ ಹಾಲಾಡಿ.
ಮದ್ದಳೆ ವಾದಕರು: ಶಂಕರ ಭಾಗವತ್, ಎ. ಪಿ. ಪಾಠಕ್, ಸುನೀಲ್ ಭಂಡಾರಿ, ಪರಮೇಶ್ವರ ಭಂಡಾರಿ ಕರ್ಕಿ.
ಯಕ್ಷಗಾನದ ಇಂದಿನ ಸ್ಥಿತಿಗತಿ ಕುರಿತು ರಾಘವೇಂದ್ರ ಆಚಾರ್ಯ (ಜನ್ಸಾಲೆ) ಅವರು ತಮ್ಮ ಅಭಿಪ್ರಾಯವನ್ನು ಹೀಗೆ ವ್ಯಕ್ತಪಡಿಸುತ್ತಾರೆ: ಇವತ್ತು ಯಕ್ಷಗಾನದಲ್ಲಿ ಬಹುಮಾನ್ಯ ಬದಲಾವಣೆಗಳಾಗಿವೆ. ಕಲಾವಿದರಿಗೆ ಈಗ ಆರ್ಥಿಕವಾಗಿ ಹೆಚ್ಚು ಅನುಕೂಲವಾಗುತ್ತಿದೆ. ಯುವಕರೂ ಮತ್ತೆ ಈ ಕಲೆವತ್ತೆ ಆಕರ್ಷಿತರಾಗುತ್ತಿದ್ದಾರೆ. ಆದರೆ ಕೆಲವು ಕಲಾವಿದರಲ್ಲಿ ಪರಿಶ್ರಮ ಮತ್ತು ಅಭ್ಯಾಸದ ಕೊರತೆ ಇದೆ ಎಂಬುದು ಗಮನಾರ್ಹ ವಿಷಯ. ನೂತನ ಪ್ರಸಂಗಗಳು ಮತ್ತು ಹಳೆಯ ಪ್ರಸಂಗಗಳ ನಡುವೆ ಸ್ಪಷ್ಟವಾದ ಅಂತರ ಕಂಡುಬರುತ್ತಿದೆ. ಈ ಅಂತರವನ್ನು ಸಮತೋಲನಗೊಳಿಸುವಲ್ಲಿ ಕಲಾವಿದರು ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಅವರು ತಮ್ಮ ಆತ್ಮೀಯ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ತುಂಬಾ ಬದಲಾವಣೆ ಆಗಿದೆ, ಹಾಗೆಯೇ ಕಲಾವಿದರಿಗೆ ಆರ್ಥಿಕವಾಗಿ ಅನುಕೂಲ ಆಗಿದೆ. ಹಾಗೆಯೆ ಅಭಿಮಾನಿಗಳು ಹುಡುಗರು ಮತ್ತೆ ಯಕ್ಷಗಾನದತ್ತ ಬಂದಿದ್ದಾರೆ. ಕೆಲವು ಕಲಾವಿದರಲ್ಲಿ ಪರಿಶ್ರಮ – ಅಭ್ಯಾಸ ಕೊರತೆ ಇದೆ. ನೂತನ ಪ್ರಸಂಗಗಳು ಮತ್ತು ಹಳೆ ಪ್ರಸಂಗಕ್ಕೂ ಅಜಗಜಾಂತರ ವ್ಯತ್ಯಾಸ ಆಗಿದೆ ಎಂದು ಜನ್ಸಾಲೆ ಅವರು ಹೇಳುತ್ತಾರೆ.

ಇಂದಿನ ಯಕ್ಷಗಾನ ಪ್ರೇಕ್ಷಕರು ಮೊದಲು ಕಲೆಯ ಅಭಿಮಾನಿಯಾಗಬೇಕು, ನಂತರ ತಮ್ಮ ನೆಚ್ಚಿನ ಕಲಾವಿದರ ಅಭಿಮಾನಿಯಾಗಬೇಕು. ಯಾವುದೇ ಪ್ರದರ್ಶನದಲ್ಲಿ ತೊಂದರೆ ಅಥವಾ ವ್ಯತ್ಯಾಸ ಕಂಡುಬಂದರೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಬದಲು, ನೇರವಾಗಿ ಕಲಾವಿದರು, ಪ್ರಸಂಗಕರ್ತರು ಅಥವಾ ಮೇಳದ ಯಜಮಾನರನ್ನು ಸಂಪರ್ಕಿಸಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದು ಉತ್ತಮ. ಇದು ಕಲಾ ಕ್ಷೇತ್ರದ ಬೆಳವಣಿಗೆಗೆ ಸಹಾಯವಾಗುತ್ತದೆ.
ವ್ಯಕ್ತಿಗತ ನಿಂದನೆ ಅಥವಾ ಟೀಕೆ-ಟಿಪ್ಪಣಿಗಳು ಕಲಾವಿದರಲ್ಲಿ ನಿರಾಸೆ ಮೂಡಿಸಬಹುದು. ಇದರಿಂದ ಅವರು ಕಲೆಯಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ಕಳಕುಹೋಗಬಹುದು. ಹೀಗಾಗಿ, ಹೊಸ ಯುವ ಪ್ರತಿಭೆಗಳೂ ರಂಗ ಪ್ರವೇಶ ಮಾಡಲು ಹಿಂದೇಟು ಹಾಕಬಹುದು. ಮುಂದಿನ ದಿನಗಳಲ್ಲಿ ಕಲಾವಿದರ ಕೊರತೆಯು ಯಕ್ಷಗಾನ ರಂಗಕ್ಕೆ ಸಂಕಷ್ಟ ತರಬಹುದು. ಹೀಗಾಗಿ, ಯಾವುದೇ ವಿಮರ್ಶೆ ಆರೋಗ್ಯಕರವಾಗಿರಬೇಕು, ಕಲೆಯ ನಿಷ್ಕಳಂಕತೆಯ ಉಳಿವಿಗಾಗಿ ಎಂಬುದು ಅವರ ನಿಷ್ಠಾವಂತ ಸಂದೇಶವಾಗಿದೆ.

ಶ್ರೀಯುತರು ಸಂಪೂರ್ಣ ಯಕ್ಷಗಾನದಿಂದ ಕೂಡಿದ ಬೆಳ್ಳಿ ತೆರೆಯಲ್ಲಿ ರಾರಾಜಿಸಿದ ರವಿ ಬಸ್ರೂರು ನಿರ್ದೇಶನದ ಕನ್ನಡ ಚಲನಚಿತ್ರ “ವೀರ ಚಂದ್ರಹಾಸ” ಈ ಚಲನಚಿತ್ರದಲ್ಲಿ ಪ್ರಮುಖವಾದ ಹಿನ್ನಲೆಗಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ ಕುರಿತು ಜನ್ಸಾಲೆ ರಾಘವೇಂದ್ರ ಆಚಾರ್ಯರು ತಮ್ಮ ಆಳವಾದ ದೃಷ್ಟಿಕೋಣವನ್ನು ಹೀಗೆ ಹಂಚಿಕೊಳ್ಳುತ್ತಾರೆ:
“ಕಲಾ ಪ್ರಪಂಚದಲ್ಲಿ ನಾನು ಎಲ್ಲ ದಿಕ್ಕಿನಿಂದಲೂ ತೃಪ್ತಿಯನ್ನು ಕಂಡಿದ್ದೇನೆ — ಕೀರ್ತಿ, ಆರ್ಥಿಕತೆ, ಗೌರವ, ಟೀಕೆ-ಟಿಪ್ಪಣಿಗಳು ಎಲ್ಲವನ್ನೂ ಅನುಭವಿಸಿದ್ದೇನೆ. ಆದರೆ ಯಾವಾಗಲೂ ನಾನು ಹೊಗಳಿದಾಗ ಹಿಗ್ಗದೆ, ತೆಗಳಿದಾಗ ಕುಗ್ಗದೆ ನನ್ನ ಕೆಲಸವನ್ನು ಶ್ರದ್ಧೆ, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಮಾಡಿದ್ದೇನೆ.
ನಾನು ಕಲಾ ಪ್ರಪಂಚಕ್ಕೆ ನನ್ನದೇ ಆದ ಶೈಲಿಯಲ್ಲಿ ಹೊಸದೇನಾದರೂ ಕೊಡುವ, ಹೊಸ ಆವಿಷ್ಕಾರಗಳನ್ನು ಮಾಡಿರುವ ಕಲಾವಿದನು. ಮುಂದಿನ ದಿನಗಳಲ್ಲೂ ಇದೇ ಧೋರಣೆಯಿಂದ ಮುಂದುವರಿಯಬೇಕು. ಈ ನಿಟ್ಟಿನಲ್ಲಿ ನನ್ನದೇ ಆದ ಸಂಸ್ಥೆ ಸ್ಥಾಪಿಸಿ, ಕಲಾವಿದರಿಗೆ ಹಾಗೂ ಯಕ್ಷಗಾನ ಕ್ಷೇತ್ರಕ್ಕೆ ಹಲವು ದಿಕ್ಕಿನಲ್ಲಿ ಸಹಾಯ ಮಾಡುವ ಆಶಯವಿದೆ. ಈಗಾಗಲೇ ‘ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ’ ಹಾಗೂ ‘ಯಕ್ಷ ರಾಘವ’ ಯೂಟ್ಯೂಬ್ ವಾಹಿನಿಯನ್ನು ಆರಂಭಿಸಿದ್ದೇನೆ. ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇನೆ, ಮುಂದೆಯೂ ನಡೆಸಬೇಕೆಂಬ ಸಂಕಲ್ಪವಿದೆ. ಈ ದಾರಿಯಲ್ಲಿ ಅಭಿಮಾನಿಗಳ ಹಾಗೂ ಪೋಷಕರ ಸಹಕಾರ ನನಗೆ ಅಗತ್ಯವಾಗಿದೆ.”
ಜನ್ಸಾಲೆ ಅವರಿಗೆ ಬಂದಿರುವ ಬಿರುದುಗಳು:-
ಯಕ್ಷಗಾನ ಕೋಗಿಲೆ, ಗಾನಗಂಧರ್ವ, ವಿಶ್ವಕರ್ಮ ಯಕ್ಷಕಲಾರತ್ಮ, ವಿಶ್ವಕೋಗಿಲೆ, ಗಾನ ಸಾರಥಿ, ಗಾನ ಸಾಮ್ರಾಟ್, ವಿಶ್ವಕರ್ಮ ಯಕ್ಷ ಗಾನ ವಿಶಾರದ, ಕಂಚಿನ ಕಂಠ, ವಿಶ್ವಕರ್ಮ ಕಲಾತಪಸ್ವಿ.

ಪ್ರಶಸ್ತಿ ಹಾಗೂ ಸನ್ಮಾನಗಳು:
ಜನ್ಸಾಲೆ ಅವರಿಗೆ ಸಾವಿರಕ್ಕೂ ಅಧಿಕ ಸನ್ಮಾನಗಳು ದೊರೆತಿವೆ. ಅವರ ಸಾಂಸ್ಕೃತಿಕ ಸೇವೆಗೆ ಮಾನ್ಯತೆ ನೀಡಿದ ಪ್ರಮುಖ ಪ್ರಶಸ್ತಿಗಳಲ್ಲಿ:
ಯಕ್ಷಕಲಾ ಶ್ರೀ
ಯಕ್ಷ ರಾಜ ಪ್ರಶಸ್ತಿ
ಶ್ರೀ ಕೃಷ್ಣ ನರಸಿಂಹಾನುಗ್ರಹ ಪ್ರಶಸ್ತಿ
ರಾಜ್ಯ ಮಟ್ಟದ ಪ್ರಶಸ್ತಿ
ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಇವೆಲ್ಲವು ಕೂಡ ಇವರ ಯಕ್ಷಗಾನ ಸೇವೆಯ ಮಾನ್ಯತೆಗೆ ಸಾಕ್ಷಿಯಾಗಿದೆ.

ಏಪ್ರಿಲ್ 22 ರಂದು ಸುಷ್ಮಾ ಆರ್ ಆಚಾರ್ಯರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಭೂಮಿಕಾ ಹಾಗೂ ಸುಮುಖ ಎಂಬ ಇಬ್ಬರು ಮಕ್ಕಳೊಂದಿಗೆ ಹರ್ಷಭರಿತ ಕುಟುಂಬ ಜೀವನವನ್ನು ಸಾಗಿಸುತ್ತಿದ್ದಾರೆ.
ಇವರು ನಂಬಿರುವ ಕಲಾಮಾತೆ ಹಾಗೂ ಮಂದಾರ್ತಿ ದುರ್ಗಾಪರಮೇಶ್ವರಿ ಅಮ್ಮನವರು, ಇವರಿಗೆ ಕಲಾಕ್ಷೇತ್ರದಲ್ಲಿ ಇನ್ನಷ್ಟು ಶಕ್ತಿ, ಸದ್ಬುದ್ಧಿ ಹಾಗೂ ಸೃಜನಶೀಲತೆ ಕರುಣಿಸಲಿ ಎಂದು ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇವೆ. ಅವರ ಕಲಾಯಾತ್ರೆ ಬೆಳಗಲಿ, ಯಶಸ್ವಿಯಾಗಲಿ ಎಂಬುದು ಎಲ್ಲ ಕಲಾಸಕ್ತರ ಹಾರೈಕೆ. ಕಲಾಮಾತೆ ಅವರ ಬದುಕಿಗೆ ಸಕಲ ಮಂಗಳಗಳು, ಆಯುರಾರೋಗ್ಯ, ಶ್ರೀ, ಧೃತಿ, ಕೀರ್ತಿ ಹಾಗೂ ಕಲಾ ಪುಣ್ಯವನ್ನು ಪರಿಪೂರ್ಣವಾಗಿ ನೀಡಲಿ ಎಂಬುದೇ ನಮ್ಮ ಸದಾಶಯ.
ನಮ್ಮ ಸೋಶಿಯಲ್ ಮೀಡಿಯಾ ಚಾನಲನ್ನು ಸೇರಲು ಇಲ್ಲಿ ಕ್ಲಿಕ್ ಮಾಡಿ:



