ಯಕ್ಷ ಚರಿತ್ರೆ-9

“ಯಕ್ಷ ಕೋಲ್ಮಿಂಚು” ಶ್ರೀ ರಾಜೇಶ್ ಭಂಡಾರಿಯವರ ಚರಿತ್ರೆ”

ವಸ್ತ್ರವಿನ್ಯಾಸದ ಮೆರುಗು, ಕುಣಿತದ ಶ್ರೀಮಂತಿಕೆ, ಮಾತುಗಾರಿಕೆಯ ಅಬ್ಬರ – ಇವೆಲ್ಲದರ ಸಮನ್ವಯವೇ ಯಕ್ಷಗಾನ, ಆ ಕಲೆಯ ಪರಮಾವಧಿ ತಲುಪುವ ಪ್ರಯತ್ನದಲ್ಲಿರುವ ಕಲಾವಿದರಲ್ಲಿ ಪ್ರಮುಖವಾಗಿ ಹೆಸರು ಮೆರೆಯುತ್ತಿರುವವರು ರಾಜೇಶ್ ಭಂಡಾರಿ ಗುಣವಂತೆ. ಕಳೆದ 21 ವರ್ಷಗಳಿಂದ ಯಕ್ಷಗಾನವನ್ನೇ ವೃತ್ತಿಯಾಗಿ ಅಳವಡಿಸಿಕೊಂಡು, ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಪ್ರೇಕ್ಷಕರನ್ನು ಸ್ಮರಣೀಯ ರೀತಿಯಲ್ಲಿ ರಂಜಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗುಣವಂತೆ ಗ್ರಾಮದಲ್ಲಿ ಶ್ರೀ ಮಂಜುನಾಥ ಭಂಡಾರಿ ಮತ್ತು ರಾಧ ಭಂಡಾರಿ ದಂಪತಿಗಳ ಪುತ್ರನಾಗಿ, ರಾಜೇಶ್‌ ಭಂಡಾರಿ ಅವರು 28-ಫೆಬ್ರವರಿ-1985ರಂದು ಜನಿಸಿದರು. ಅವರ ಕಲಾ ಜೀವನಕ್ಕೆ ದಿಕ್ಕು ತೋರಿದ ಹೆರಂಜಾಲು ವೆಂಕಟರಮಣ ಗಾಣಿಗ ಮತ್ತು ಕೃಷ್ಣ ಭಂಡಾರಿ ಗುಣವಂತೆ ಅವರ ಯಕ್ಷಗಾನದ ಪ್ರಮುಖ ಗುರುಗಳು.

ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸಲು ತಂದೆಯ ಪ್ರೇರಣೆಯೇ ಪ್ರಮುಖ ಕಾರಣ ಎಂದು ರಾಜೇಶ್ ಭಂಡಾರಿ ಹೇಳುತ್ತಾರೆ. ಬಾಲ್ಯದಲ್ಲೇ ವೃಶಸೇನನ ಪಾತ್ರ ನಿರ್ವಹಿಸಿದ ಸಂದರ್ಭ, ಕೆರೆಮನೆ ಮಹಾಬಲ ಹೆಗಡೆಯವರು ತಂದೆಯ ಬಳಿ ಬಂದು, “ನಿಮ್ಮ ಜಾತಿಯಲ್ಲಿ ಎಲ್ಲಾ ಹಿಮ್ಮೇಳಕ್ಕೆ ಹೆಚ್ಚು ಬರುತ್ತದೆ, ಆದರೆ ಈ ಹುಡುಗನಲ್ಲಿ ಮುಮ್ಮೇಳದ ಭವಿಷ್ಯ ಇದೆ, ಅವನನ್ನು ಆ ದಿಕ್ಕಿಗೆ ಉತ್ತೇಜಿಸಿ” ಎಂದು ಸಲಹೆ ನೀಡಿದ ಘಟನೆ ಅವರ ಭವಿಷ್ಯಕ್ಕೆ ದಿಕ್ಕು ನೀಡಿತು.

ಅಭಿಮನ್ಯು ಕಾಳಗ, ವೃಶಸೇನಾ ಕಾಳಗ, ಚಂದ್ರವಳಿ ವಿಲಾಸ, ಜಾಂಬವತಿ ಕಲ್ಯಾಣ, ಚಕ್ರ ಚಂಡಿಕೆ, ಗದಾಯುದ್ಧ, ನರಕಾಸುರ ವಧೆ ಇವು ರಾಜೇಶ್ ಅವರ ನೆಚ್ಚಿನ ಪ್ರಸಂಗಗಳು. ಪಾತ್ರಗಳ ವಿಷಯದಲ್ಲಿ ಅಭಿಮನ್ಯು, ಕೃಷ್ಣ, ಲವ, ಕುಶ, ಬರ್ಬರಿಕ, ನರಕಾಸುರ, ಸುಧನ್ವ, ರಾವಣ ಅವರ ಇಷ್ಟದ ವೇಷಗಳು.

ಪ್ರತಿಭಾವಂತ ಕಲಾವಿದನಾಗಿ ರಂಗಕ್ಕೆ ಹೋಗುವ ಮೊದಲು ರಾಜೇಶ್ ತಮ್ಮ ಪಾತ್ರದ ಬಗ್ಗೆ ಪೂರ್ವಜ್ಞಾನ ಹೊಂದುವುದು, ಪ್ರಸಂಗದ ನಡಿವೇಳೆ ತಿಳಿದುಕೊಳ್ಳುವುದು, ಹಿರಿಯ ಕಲಾವಿದರು, ಎದುರು ಕಲಾವಿದರು ಮತ್ತು ಭಾಗವತರ ಜೊತೆ ಮುಕ್ತ ಸಂವಾದ ನಡೆಸಿ ತಯಾರಾಗುವುದು ಅವರ ತಯಾರಿ ಶೈಲಿಯ ಭಾಗವಾಗಿದೆ.

ಯಕ್ಷಗಾನದ ಇಂದಿನ ಸ್ಥಿತಿ ಕುರಿತು ರಾಜೇಶ್ ಭಂಡಾರಿ ಹೇಳುವಂತೆ, ಈ ಕಲೆ ಎಂದಿಗೂ ನಾಶವಾಗದು ಅದು ನಿರಂತರವಾಗಿ ತನ್ನ ಸ್ವರೂಪವನ್ನು ಕಾಲಾನುಸಾರವಾಗಿ ಬದಲಿಸುತ್ತಾ ಸಾಗುತ್ತಿದೆ. ಆದರೆ, ಈ ಬದಲಾವಣೆಗಳಲ್ಲಿ ಕೆಲವು ಅವಶ್ಯಕವೂ ಆಗಿದ್ದರೆ, ಕೆಲವು ಸ್ವಾಗತಾರ್ಹವಾಗಿಯೂ ಪರಿಗಣಿಸಲ್ಪಡಬೇಕು.

ಇಂದಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ:– ಪ್ರಜ್ಞಾವಂತ ಹಾಗೂ ಕಲಾ ಅರಿವುಳ್ಳ ಪ್ರೇಕ್ಷಕರ ಕೊರತೆ ಇಂದು ಹೆಚ್ಚು ಕಂಡು ಬರುತ್ತಿದೆ. ಕಲೆಯ ಆರಾಧನೆಯ ಬದಲು, ಕೆಲವೊಬ್ಬ ಕಲಾವಿದರ ಭಕ್ತಿಯು ಹೆಚ್ಚು ಹೆಚ್ಚಾಗಿರುವುದನ್ನು ಗಮನಿಸಬಹುದು. ಯಕ್ಷಗಾನ ಒಂದು ಸಮಗ್ರ ಕಲೆ ಎಂಬ ದೃಷ್ಟಿಕೋಣ ಕಳೆದು ಹೋಗುತ್ತಿದ್ದಂತೆ, ಕೇವಲ ಒಂದು ವಿಭಾಗ ಅಥವಾ ವ್ಯಕ್ತಿಗೆ ಮಾತ್ರ ಪ್ರಾಶಸ್ತ್ಯ ನೀಡುವುದು ಕಲೆಗೂ ಅಪಾಯಕಾರಿ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸುತ್ತಾರೆ.

ರಾಜೇಶ್ ಭಂಡಾರಿ
Yakshagana History
Yakshagana Artists Biography
Tenkutittu and Badagutittu Yakshagana
Yakshagana Karnataka Folk Art
Yaksha Charithre

ಹೈದ್ರಾಬಾದ್ ಯಕ್ಷೋತ್ಸವ ಸನ್ಮಾನ, ಬೆಂಗಳೂರು ಸನ್ಮಾನ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಗೌರವಗಳು ರಾಜೇಶ್ ಅವರಿಗೆ ಲಭಿಸಿವೆ.

ಗುಂಡಬಾಳ ಮೇಳದಲ್ಲಿ ಪುಂಡು ವೇಷದಿಂದ ರಂಗ ಪ್ರವೇಶ ಮಾಡಿದ ಅವರು, ಮೂರು ವರ್ಷ ಸೇವೆ ಸಲ್ಲಿಸಿ ನಂತರ ಕಮಲಶಿಲೆ ಮೇಳದಲ್ಲಿ ಮೂರು ವರ್ಷ, ನಂತರ ಬಡಗುತಿಟ್ಟಿನ ಪ್ರಸಿದ್ಧ ಸಾಲಿಗ್ರಾಮ ಮೇಳದಲ್ಲಿ ಅಚ್ಚುಮೆಚ್ಚಿನ 14 ವರ್ಷ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ಮೆಕ್ಕೆಕಟ್ಟು ಮೇಳದಲ್ಲಿ ತಮ್ಮ ಕಲಾ ಸೇವೆಯನ್ನು ಮುಂದುವರೆಸುತ್ತಿದ್ದಾರೆ.

ಪುಸ್ತಕ ಓದುವುದು, ಚಂಡೆ ಮದ್ದಳೆ ಬರಿಸುವುದು, ಶಹನಾಯಿ ವಾದ್ಯ ಬಾರಿಸುವುದು, ಕ್ರಿಕೆಟ್ ಆಡುವುದು ಇವೆಲ್ಲವೂ ರಾಜೇಶ್ ಭಂಡಾರಿ ಗುಣವಂತೆಯವರ ಹವ್ಯಾಸಗಳು. ಮನೆಮಂದಿಯ ಸಹಕಾರವೂ ಅವರ ಹವ್ಯಾಸಗಳಿಗೆ ಬೆನ್ನುತಂಡವಾಗಿದೆ. ಅವರ ಅಪ್ಪ ಮತ್ತು ಅಣ್ಣ ಅವರು ಚಂಡೆ, ಮದ್ದಳೆ ರೆಡಿಯ ಕೆಲಸದಲ್ಲಿ ತೊಡಗಿರುವುದರಿಂದ, ಆ ಕೆಲಸಗಳಲ್ಲಿ ಸ್ವಲ್ಪ ಸಹಾಯ ಮಾಡುವುದೂ ಅವರ ದಿನಚರಿಯಲ್ಲಿ ಸೇರಿದೆ.

ತಂದೆ-ತಾಯಿ, ಪತ್ನಿಯ ಪ್ರೋತ್ಸಾಹ ಹಾಗೂ ಗುರುಗಳ ಮಾರ್ಗದರ್ಶನವೇ ಯಕ್ಷಗಾನ ರಂಗದಲ್ಲಿ ಈ ಮಟ್ಟದ ಸಾಧನೆ ಮಾಡಬಲ್ಲವರಾಗಲು ಕಾರಣವಾಗಿದೆ ಎಂದು ರಾಜೇಶ್ ಭಂಡಾರಿ ಗುಣವಂತೆ ಹೆಮ್ಮೆಪಟ್ಟು ಹೇಳುತ್ತಾರೆ.

ವೈಯಕ್ತಿಕ ಜೀವನದಲ್ಲಿ ರಾಜೇಶ್‌ ಭಂಡಾರಿ ಅವರು ವಿನಂತಿ ರಾಜೇಶ್ ಅವರನ್ನು ವಿವಾಹವಾಗಿ, ಧಾತ್ರಿ ಮತ್ತು ದಿಯಾ ಎಂಬ ಇಬ್ಬರು ಮಕ್ಕಳೊಂದಿಗೆ ಸೌಖ್ಯಪೂರ್ಣ ಕುಟುಂಬವನ್ನು ರೂಪಿಸಿಕೊಂಡಿದ್ದಾರೆ.

ಇವರು ನಂಬಿರುವ ಕಲಾಮಾತೆ ಹಾಗೂ ಮಂದಾರ್ತಿ ದುರ್ಗಾಪರಮೇಶ್ವರಿ ಅಮ್ಮನವರು, ಇವರಿಗೆ ಕಲಾಕ್ಷೇತ್ರದಲ್ಲಿ ಇನ್ನಷ್ಟು ಶಕ್ತಿ, ಸದ್ಬುದ್ಧಿ ಹಾಗೂ ಸೃಜನಶೀಲತೆ ಕರುಣಿಸಲಿ ಎಂದು ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇವೆ. ಅವರ ಕಲಾಯಾತ್ರೆ ಬೆಳಗಲಿ, ಯಶಸ್ವಿಯಾಗಲಿ ಎಂಬುದು ಎಲ್ಲ ಕಲಾಸಕ್ತರ ಹಾರೈಕೆ. ಕಲಾಮಾತೆ ಅವರ ಬದುಕಿಗೆ ಸಕಲ ಮಂಗಳಗಳು, ಆಯುರಾರೋಗ್ಯ, ಶ್ರೀ, ಧೃತಿ, ಕೀರ್ತಿ ಹಾಗೂ ಕಲಾ ಪುಣ್ಯವನ್ನು ಪರಿಪೂರ್ಣವಾಗಿ ನೀಡಲಿ ಎಂಬುದೇ ನಮ್ಮ ಸದಾಶಯ.

ನಮ್ಮ ಸೋಶಿಯಲ್ ಮೀಡಿಯಾ ಚಾನಲನ್ನು ಸೇರಲು ಇಲ್ಲಿ ಕ್ಲಿಕ್ ಮಾಡಿ:

Leave a Reply

Your email address will not be published. Required fields are marked *