“ಯಕ್ಷ ಚೆಲುವ” ಶ್ರೀ ಉದಯ ಹೆಗಡೆ ಕಡಬಾಳರ ಚರಿತ್ರೆ”

ಶಿರಸಿ ತಾಲೂಕಿನ ಕಡಬಾಳದಲ್ಲಿ ದಿನಾಂಕ 24-೦6-1983 ರಂದು ಮಧುಕೇಶ್ವರ ಹಾಗೂ ಮಹಾದೇವಿ ದಂಪತಿಗಳ ಮನೆಯಲ್ಲಿ ಜನಿಸಿದ ಉದಯ ಹೆಗಡೆ ಅವರು ಡಿಪ್ಲೋಮಾ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾದರು, ಚಿಟ್ಟಾಣಿ ರಾಮಚಂದ್ರ ಹೆಗಡೆ ಮತ್ತು ಕಣ್ಣಿಮನೆ ಗಣಪತಿ ಭಟ್ ಅವರ ಯಕ್ಷಗಾನ ಕುಣಿತದ ಅಪಾರ ಅಭಿಮಾನದಿಂದ ಪ್ರೇರಿತವಾಗಿ ಯಕ್ಷಗಾನ ರಂಗದತ್ತ ತಮ್ಮ ಕಲಾಜೀವನವನ್ನು ಆರಂಭಿಸಿದರು. ಮಂಜುನಾಥ ಭಟ್ ಹೊಸತೋಟ ಮತ್ತು ಪರಮೇಶ್ವರ ಹೆಗಡೆ ಐನ್ಬೈಲು ಇವರ ಯಕ್ಷಗಾನದಲ್ಲಿ ಮಾರ್ಗದರ್ಶಕರಾಗಿದ್ದು, ಪೌರಾಣಿಕ ಪ್ರಸಂಗಗಳೆಂದರೆ ಅಪಾರ ಪ್ರೀತಿ ಹೊಂದಿರುವ ಇವರು, ಯಾವುದೇ ರೀತಿಯ ವೇಷಧಾರಣೆಗೆ ಸದಾ ಸಿದ್ದರಾಗಿರುವ ಅಪಾರ ಶ್ರದ್ಧೆ ಮತ್ತು ಆಸಕ್ತಿಯುಳ್ಳ ಕಲಾವಿದರಾಗಿ ಪ್ರಸಿದ್ಧರಾಗಿದ್ದಾರೆ.
ಯಕ್ಷಗಾನದ ಕುರಿತಾದ ಆಸಕ್ತಿ ಹಾಗೂ ನಿಷ್ಠೆಯಿಂದ ಯಕ್ಷ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತಮ್ಮ ಯಕ್ಷ ಜೀವನದಲ್ಲಿ ಅವರು ಯಕ್ಷ ದೇಗುಲ ಮೇಳದಲ್ಲಿ 3 ವರ್ಷ, ಗುಂಡಬಾಳ ಮೇಳದಲ್ಲಿ 4 ವರ್ಷ, ಕೆರೆಮನೆ ಮೇಳದಲ್ಲಿ 1 ವರ್ಷ, ಹಾಲಾಡಿ ಮೇಳದಲ್ಲಿ 1 ವರ್ಷ ಹಾಗೂ ಪೆರ್ಡೂರು ಮೇಳದಲ್ಲಿ ಕಳೆದ 9 ವರ್ಷಗಳಿಂದ ಸತತವಾಗಿ ತಿರುಗಾಟ ಮಾಡುತ್ತಾ, ಅನೇಕ ಪ್ರಸಂಗಗಳಲ್ಲಿ ತಮ್ಮ ವೈಖರಿ, ಅಭಿನಯ ಹಾಗೂ ಪ್ರಭಾವಶಾಲಿ ವೇಷಧಾರಣೆಯಿಂದ ಪ್ರೇಕ್ಷಕರ ಮನಸೆಳೆಯುತ್ತಿದ್ದಾರೆ. ಯಕ್ಷಗಾನದ ವಿಭಿನ್ನ ಪಾತ್ರಗಳ ವಿಶ್ಲೇಷಣೆ, ಇತರ ಕಲಾವಿದರ ವೇಷಗಳ ವೀಕ್ಷಣೆ, ಹಾಗೂ ಯಕ್ಷಗಾನ ಸಂಬಂಧಿತ ಪುಸ್ತಕಗಳ ಅಧ್ಯಯನ ಎಂಬುವು ಇವರ ಹವ್ಯಾಸಗಳಾಗಿದ್ದು, ಪ್ರತಿಯೊಂದು ಪಾತ್ರವನ್ನು ಆಳವಾಗಿ ಗ್ರಹಿಸಿ ಅಭಿನಯಿಸಲು ಸದಾ ಚಿಂತನೆ ನಡೆಸುತ್ತಾರೆ.

ಯಕ್ಷಗಾನದ ಇಂದಿನ ಸ್ಥಿತಿ ಕುರಿತು:
ಹಿಂದಿನ ದಿನಗಳ ಯಕ್ಷಗಾನವನ್ನು ಹೋಲಿಸಿದಾಗ, ಇಂದಿನ ಯಕ್ಷಗಾನವು ಬಹುಮಟ್ಟಿಗೆ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ. ವಿಶಿಷ್ಟವಾಗಿ ಆರ್ಥಿಕ ವ್ಯವಸ್ಥೆಯಲ್ಲಿ ಗುಣಾತ್ಮಕ ಬದಲಾವಣೆ ಕಂಡುಬಂದಿದೆ. ಕಲಾವಿದರಿಗೆ ನೀಡುವ ಗೌರವಧನ ಮತ್ತು ಅನುವುಗಳು ಹೆಚ್ಚಾಗಿವೆ. ಇದೇ ರೀತಿ ಪ್ರೇಕ್ಷಕರ ಸಂಖ್ಯೆಯಲ್ಲಿಯೂ ದೊಡ್ಡ ಮಟ್ಟದ ಬೆಳವಣಿಗೆ ಕಂಡುಬರುತ್ತಿದೆ. ಟಿವಿ, ವಾಟ್ಸಪ್, ಫೇಸ್ಬುಕ್ ಮೊದಲಾದ ಸಾಮಾಜಿಕ ಮಾಧ್ಯಮಗಳ ಪ್ರಭಾವದ ನಡುವೆಯೂ ಯಕ್ಷಗಾನವನ್ನು ಅನೇಕ ಯುವಕಲಾವಿದರು ಮತ್ತು ಯುವ ಪ್ರೇಕ್ಷಕರು ಗುರುತಿಸಿ, ಅದನ್ನು ಅನುಭವಿಸುತ್ತಿರುವುದು ಸಂತೋಷದ ವಿಷಯವಾಗಿದೆ.
ಯಕ್ಷಗಾನದಲ್ಲಿ ಪ್ರಸಾರವಾಗುವ ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗಗಳು ಯುವಜನತೆಗೆ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ಇದರ ಮೂಲಕ ಯಕ್ಷಗಾನವು ನವೀನ ಪೀಳಿಗೆಗೆ ನಿಕಟವಾಗುತ್ತಿದೆ. ಹೀಗೆ ಹೇಳಬಹುದು – ಹಳೆಯ ಕಾಲದ ಯಕ್ಷಗಾನವನ್ನು ಹೋಲಿಸಿದರೆ ಇಂದಿನ ಯಕ್ಷಗಾನವು ತಂತ್ರಜ್ಞಾನ, ಕಲಾತ್ಮಕತೆ ಮತ್ತು ಸಾಂಸ್ಕೃತಿಕ ಅರಿವಿನಲ್ಲಿ ನಿಜಕ್ಕೂ ಸಾಕಷ್ಟು ಸುಧಾರಣೆ ಪಡೆದಿದೆ. ಇದು ಯಕ್ಷಗಾನದ ಭವಿಷ್ಯಕ್ಕೆ ಆಶಾದಾಯಕವಾದ ಬೆಳಕು ಬೀರುತ್ತಿದೆ.
ಯಕ್ಷರಂಗದಲ್ಲಿ ಮುಂದಿನ ಯೋಜನೆಗಳು:
ನಾನು ಮುಂದಿನ ದಿನಗಳಲ್ಲಿಯೂ ಯಕ್ಷಗಾನದಲ್ಲಿಯೇ ಮುಂದುವರೆಯುತ್ತೇನೆ. ಯಕ್ಷಗಾನವು ಕೇವಲ ಕೆಲವು ಜಿಲ್ಲೆಗಳ ಅಥವಾ ಪ್ರದೇಶಗಳೊಳಗೆ ಸೀಮಿತವಾಗದೆ, ಜಾಗತಿಕ ಮಟ್ಟದಲ್ಲಿ ಅದರ ಸಾಮರ್ಥ್ಯವನ್ನು ತೋರಿಸಬೇಕು, ಪ್ರಪಂಚದಾದ್ಯಂತ ಈ ಕಲೆ ಯಾರು ನೋಡಿದರೂ ಆನಂದಿಸಬಹುದಾದ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕೆಂಬುದು ನನ್ನ ಆಸೆ ಹಾಗೂ ಯೋಜನೆ.
ಅವರು ತಮ್ಮ ಕಲೆಗಾಗಿ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿರುವುದು, ಅವರ ಪ್ರತಿಭೆಯ ಮಾನ್ಯತೆಯಾಗಿ ಪರಿಗಣಿಸಬಹುದು. ಆದರೆ, ಈ ಬಗ್ಗೆ ಮಾತನಾಡಿದಾಗ ಅವರು ನಿರಾಳವಾಗಿ ಹೀಗೆ ಹೇಳುತ್ತಾರೆ:
ಪ್ರಶಸ್ತಿ, ಪತಾಕೆ ಎಂಬುದನ್ನು ನಾನು ಹೆಚ್ಚಿನ ಮಹತ್ವದಿಂದ ನೋಡುವುದಿಲ್ಲ. ಜನರು ನನ್ನ ವೇಷ, ನನ್ನ ಅಭಿನಯವನ್ನು ಮೆಚ್ಚಿ ಅಭಿನಂದಿಸಿದರೆ ಅದು ನನಗೆ ಬಹುಮಹತ್ವದ ಸನ್ಮಾನ. ನಿಜವಾದ ಪ್ರಶಸ್ತಿ ಎಂದರೆ ಪ್ರೇಕ್ಷಕರ ಅಭಿಮಾನ ಮತ್ತು ಮೆಚ್ಚುಗೆ.


ಶ್ರೀಯುತ ಉದಯ ಹೆಗಡೆ ಅವರು 17-12-2018 ರಂದು ಅಶ್ವಿನಿ ಕೊಂಡದಕುಳಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿ, ಈಗ ಅವರು ಪರಸ್ಪರ ಬಾಂಧವ್ಯ, ಭರವಸೆ ಮತ್ತು ಮನಸಾ-ವಾಚಾ-ಕರ್ಮಣಾ ಬೆಸೆದ ಸುಖಿ ಸಂಸಾರವನ್ನು ಸಾಗಿಸುತ್ತಿದ್ದಾರೆ.

ಶ್ರೀಯುತರು ಸಂಪೂರ್ಣ ಯಕ್ಷಗಾನದಿಂದ ಕೂಡಿದ ಬೆಳ್ಳಿ ತೆರೆಯಲ್ಲಿ ರಾರಾಜಿಸಿದ ರವಿ ಬಸ್ರೂರು ನಿರ್ದೇಶನದ ಕನ್ನಡ ಚಲನಚಿತ್ರ “ವೀರ ಚಂದ್ರಹಾಸ” ಈ ಚಿತ್ರದಲ್ಲಿ ಪ್ರಮುಖವಾದ ಮದನನ ಪಾತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

ಇವರು ನಂಬಿರುವ ಕಲಾಮಾತೆ ಹಾಗೂ ಮಂದಾರ್ತಿ ದುರ್ಗಾಪರಮೇಶ್ವರಿ ಅಮ್ಮನವರು, ಇವರಿಗೆ ಕಲಾಕ್ಷೇತ್ರದಲ್ಲಿ ಇನ್ನಷ್ಟು ಶಕ್ತಿ, ಸದ್ಬುದ್ಧಿ ಹಾಗೂ ಸೃಜನಶೀಲತೆ ಕರುಣಿಸಲಿ ಎಂದು ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇವೆ. ಅವರ ಕಲಾಯಾತ್ರೆ ಬೆಳಗಲಿ, ಯಶಸ್ವಿಯಾಗಲಿ ಎಂಬುದು ಎಲ್ಲ ಕಲಾಸಕ್ತರ ಹಾರೈಕೆ. ಕಲಾಮಾತೆ ಅವರ ಬದುಕಿಗೆ ಸಕಲ ಮಂಗಳಗಳು, ಆಯುರಾರೋಗ್ಯ, ಶ್ರೀ, ಧೃತಿ, ಕೀರ್ತಿ ಹಾಗೂ ಕಲಾ ಪುಣ್ಯವನ್ನು ಪರಿಪೂರ್ಣವಾಗಿ ನೀಡಲಿ ಎಂಬುದೇ ನಮ್ಮ ಸದಾಶಯ.



